ಅಡಳಿತ ಮಂಡಳಿ
ಅಡಳಿತ ಮಂಡಳಿ

ಹೋಮ್ | ನಮ್ಮ ಬಗ್ಗೆ | ನಿರ್ವಹಣೆ

ನಮ್ಮ ಆಡಳಿತ ಮಂಡಳಿ

ಗೌರವ ಅಧ್ಯಕ್ಷರು.

ಶ್ರೀ ವೀರಣ್ಣ ವಿ. ಚಿಗಟೇರಿ

ಶ್ರೀ ವೀರಣ್ಣ ವಿ ಚಿಗಟೇರಿ, ಇವರು ಕಳೆದ 50 ವರ್ಷಗಳಿಂದ ವ್ಯವಹಾರ ಮತ್ತು ಲೋಕೋಪಕಾರಿ ಕ್ಷೇತ್ರಗಳಿಗೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ಜವಳಿ ಉದ್ಯಮದಲ್ಲಿನ ಅವರ ನಾಯಕತ್ವ, ಹಗುರವಾದ ಗುಂಡು ನಿರೋಧಕ (ಬುಲೆಟ್ ಪ್ರೂಫ್) ಜಾಕೆಟ್‌ಗಳಂತಹ ನವೀನ ಉತ್ಪನ್ನಗಳ ತಯಾರಿಕೆಗೆ ಕಾರಣವಾಯಿತು, ಇದು ಭಾರತದ ಭದ್ರತಾ ವಲಯದ ಮೇಲೆ ಗಮನಾರ್ಹ ಪರಿಣಾಮ ಬೀರಿರುತ್ತದೆ. ಅವರು ಶಿಕ್ಷಣ ಕ್ಷೇತ್ರಕ್ಕೆ ಬದ್ಧರಾಗಿದ್ದು, ದಾವಣಗೆರೆಯಲ್ಲಿ ಸೌಲಭ್ಯ ವಂಚಿತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಒಂಭತ್ತು ಶಾಲೆಗಳ ಮೇಲ್ವಿಚಾರಣೆಯನ್ನು ನಡೆಸಿರುತ್ತಾರೆ.

ಕುಟುಂಬದಲ್ಲಿ ಬೇರೂರಿರುವ ಪರೋಪಕಾರಿ ಪರಂಪರೆಯನ್ನು ಶ್ರೀ ವೀರಣ್ಣನವರು ಗೌರವಿಸುತ್ತಾ ಮುಂದುವರೆಸಿದ್ದಾರೆ. ಅವರ ಪತ್ನಿ ದಿವಂಗತ ಸುರೇಖಾ ವಿ ಚಿಗಟೇರಿ ಅವರು ಶೈಕ್ಷಣಿಕ ರಂಗದಲ್ಲಿ ವಿಶೇಷ ಆಸಕ್ತಿಹೊಂದಿದ್ದ ಕಾರಣ ದಾವಣಗೆರೆ (ಮಾವನ ಮನೆ ಸಂಬಂಧಿತ) ಮತ್ತು ಬೆಂಗಳೂರಿನ ( ತವರುಮನೆ ಸಂಬಂಧಿತ) ಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಸಕ್ರಿಯವಾಗಿ ಬೆಂಬಲಿಸಿದರು. ದಂಪತಿಗಳು ಒಟ್ಟಾಗಿ ಸಮುದಾಯದ ಕಲ್ಯಾಣ, ಸೌಲಭ್ಯ ವಂಚಿತ ಮಕ್ಕಳಿಗೆ ಶಿಕ್ಷಣ ಹಾಗೂ ಇನ್ನಿತರ ರಂಗಗಳಲ್ಲಿ ಶಾಶ್ವತ ಕೊಡುಗೆಗಳನ್ನು ನೀಡಿದ್ದಾರೆ.

ಅವರು ನಾಲ್ಕು ಮಕ್ಕಳ ತಂದೆಯಾಗಿದ್ದು, ಮಕ್ಕಳು ಯುಕೆ, ಯುಎಸ್, ಸಿಂಗಾಪುರ್ ಮತ್ತು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಮ್ಮ ಕುಟುಂಬ ಮತ್ತು ಸಮುದಾಯಕ್ಕೆ ವೀರಣ್ಣನವರ ನಿರಂತರ ಸಮರ್ಪಣೆಯು, ಶಿಕ್ಷಣ ಮತ್ತು ಸಮಾಜದ ಸೇವಾರಂಗದಲ್ಲಿ ಗುರುತಿಸುವಂತೆ ಮಾಡಿದೆ.

ಅಧ್ಯಕ್ಷರು

ಶ್ರೀ ಮುರುಗೇಂದ್ರ ವಿ. ಚಿಗಟೇರಿ

ಶ್ರೀ ಮುರುಗೇಂದ್ರ ವಿ ಚಿಗಟೇರಿ ಅವರು ಪ್ರಸ್ತುತ, ಕರ್ನಾಟಕದ ದಾವಣಗೆರೆಯಲ್ಲಿ, 62 ವರ್ಷದ ಇತಿಹಾಸವಿರುವ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ (SJJES) ಅಧ್ಯಕ್ಷರಾಗಿದ್ದಾರೆ. ಇಲ್ಲಿಯವರೆಗೆ ಸುಮಾರು 15,000 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿರುವ SJJES, ಈಗ ಇವರ ನಾಯಕತ್ವದಲ್ಲಿ ತನ್ನ ಪರಂಪರೆಯನ್ನು ಮುಂದುವರೆಸಿದೆ. ಅಕ್ಕಮಹಾದೇವಿ ಬಾಲಕಿಯರ ಪ್ರೌಢಶಾಲೆ ನಗರದ ಮೊದಲ ಕನ್ನಡ ಮಾಧ್ಯಮ ಖಾಸಗಿ ಬಾಲಕಿಯರ ಪ್ರೌಢಶಾಲೆಗಳ ಪಟ್ಟಿಯಲ್ಲಿ ಸೇರಿದೆ.

ಮುರುಗೇಂದ್ರರವರು ತಂತ್ರಜ್ಞಾನ ಆಧಾರಿತ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು “ಡಿಜಿಟಲ್ ತಂತ್ರಜ್ಞಾನ” ಉಪಕರಣಗಳನ್ನು ಸಂಯೋಜಿಸುವ ಮೂಲಕ ಸಂಸ್ಥೆಯನ್ನು ಆಧುನೀಕರಿಸುತ್ತಿದ್ದಾರೆ. ಅವರು ಬೆಂಗಳೂರಿನ ಟೆಕ್ಮಂತು ಡಿಜಿಟಲ್‌ನ (Techmantu Digital) ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಆಗಿದ್ದಾರೆ, ಇದು ಉದ್ಯಮಗಳ ಬೆಳವಣಿಗೆ ಮತ್ತು ನಾವೀನ್ಯತೆಗಾಗಿ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳಲು ಮಾರ್ಗದರ್ಶನ ನೀಡುವ ಸಲಹಾ ಸಂಸ್ಥೆಯಾಗಿದೆ. ಅವರ USA, UK ಮತ್ತು ಭಾರತದಲ್ಲಿಯ ವೃತ್ತಿಪರ ಜಾಗತಿಕ ಅನುಭವವನ್ನು, ಈಗ ತಮ್ಮ ವ್ಯಾಪಾರ ಮತ್ತು ಶೈಕ್ಷಣಿಕ ವ್ಯವಸ್ಥೆಗಳಲ್ಲಿ ವಿನಿಯೋಗಿಸುತ್ತಿದ್ದಾರೆ.

ಶ್ರೀ ಮುರುಗೇಂದ್ರ ವಿ ಚಿಗಟೇರಿಯವರ ಶಿಕ್ಷಣ ಮತ್ತು ಡಿಜಿಟಲ್ ಪ್ರಗತಿಗೆ ಹೊಂದಿರುವ ದೂರದೃಷ್ಟಿ ಮತ್ತು ಸಮರ್ಪಣೆಯ ಭಾವನೆಯು ಕರ್ನಾಟಕದಲ್ಲಿ ಶೈಕ್ಷಣಿಕ ಉತ್ಕೃಷ್ಟತೆಗೆ SJJES ಒಂದು ದ್ಯೋತಕದಂತೆ ಅರಳಿದೆ.

ಉಪಾಧ್ಯಕ್ಷರು

ಶ್ರೀ ಬೆಳಗಾವಿ ಬಸವರಾಜಪ್ಪ

ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ (CA) ಆಗಿರುವ ಶ್ರೀ ಬೆಳಗಾವಿ ಬಸವರಾಜಪ್ಪನವರು ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಆರ್ಥಿಕ ಕಾರ್ಯತಂತ್ರವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಸಿಸ್ಟಮ್ ಮತ್ತು ಬ್ಯಾಂಕ್ ಏಕಕಾಲಿಕ ಲೆಕ್ಕಪರಿಶೋಧನೆಯಲ್ಲಿ ವ್ಯಾಪಕ ಪರಿಣತಿಯೊಂದಿಗೆ, ಅವರು ಸಹಕಾರಿ, ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕ್‌ಗಳಿಗೆ ವಿಶೇಷ ಸೇವೆಗಳನ್ನು ಒದಗಿಸಿದ್ದಾರೆ.

ತಮ್ಮ ವೃತ್ತಿಪರ ಸಾಧನೆಗಳನ್ನು ಮೀರಿ, ಶ್ರೀ ಬಸವರಾಜಪ್ಪನವರು ಸಮಾಜಸೇವೆಗೆ ತಮ್ಮನ್ನು ಆಳವಾಗಿ ತೊಡಗಿಸಿಕೊಂಡಿದ್ದಾರೆ. ಅವರು ರೋಟರಿಯಲ್ಲಿ ಖಜಾಂಚಿ, ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಅಲ್ಲದೆ ದಾವಣಗೆರೆ ಅರ್ಬನ್ ಕೋ-ಆಪರೇಟೀವ್ ಬ್ಯಾಂಕ್‌ನ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೀರಶೈವ ಮಹಾ ಸಭಾದ ದಾವಣಗೆರೆ ಜಿಲ್ಲಾ ಘಟಕದ ಖಜಾಂಚಿಯಾಗಿ ಇತ್ತೀಚೆಗೆ ನೇಮಕಗೊಂಡಿರುತ್ತಾರೆ.

SJJES ನ ಉಪಾಧ್ಯಕ್ಷರಾಗಿ, ಶ್ರೀ ಬಸವರಾಜಪ್ಪನವರು ಸಂಸ್ಥೆಯ ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಬಲಪಡಿಸಲು ತಮ್ಮ ಆರ್ಥಿಕವಲಯದ ಪರಿಣತಿಯನ್ನು ನೀಡುತ್ತಿದ್ದಾರೆ. ಇದು ಶಿಕ್ಷಣವನ್ನು ಒದಗಿಸುವ ಸಂಸ್ಥೆಯ ಧ್ಯೇಯವನ್ನು ಮುಂದುವರಿಸಲು ಸಹಕಾರಿಯಾಗಿದೆ. ಇವರು ಶ್ರೀಮತಿ ಶಾಂತಲಾ ಅವರನ್ನು ವಿವಾಹವಾಗಿದ್ದು, ಒಬ್ಬ ಪುತ್ರಿ ಇದ್ದಾರೆ.

ಕಾರ್ಯದರ್ಶಿಗಳು

ಶ್ರೀ ಮನೋಹರ ಎಸ್ ಚಿಗಟೇರಿ

ಶ್ರೀ ಮನೋಹರ ಎಸ್ ಚಿಗಟೇರಿ ಅವರು 2018 ರಿಂದ SJJES ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಅವರ ಅಜ್ಜ ಶ್ರೀ ವೀರಭದ್ರಪ್ಪ ಎಂ. ಚಿಗಟೇರಿ ಅವರು 1962 ರಲ್ಲಿ ಸ್ಥಾಪಿಸಿದ ಶಿಕ್ಷಣ ಕ್ಷೇತ್ರದ ಸೇವಾ ಪರಂಪರೆಯನ್ನು ಮುಂದುವರೆಸಿದ್ದಾರೆ. ಮನೋಹರ್ ಅವರ ದೊಡ್ಡಪ್ಪ, ಶ್ರೀ ವೀರಣ್ಣ ವಿ. ಚಿಗಟೇರಿಯವರು 2019 ರವರೆಗೆ ಸಂಸ್ಥೆಯ ಅಧ್ಯಕ್ಷರಾಗಿ , SJJES ಅನ್ನು ವಿಸ್ತರಿಸಿದರು ಮತ್ತು ಇಂದು ಶ್ರೀ ವೀರಣ್ಣನವರ ಪುತ್ರ, ಮನೋಹರ್ ರವರ ಸಹೋದರ, ಮುರುಗೇಂದ್ರರವರು ಅಧ್ಯಕ್ಷರಾಗಿ ಮುನ್ನಡೆಸುತ್ತಿದ್ದಾರೆ. ಶ್ರೀ ಮನೋಹರ ಎಸ್ ಚಿಗಟೇರಿ ಅವರು ಸಂಸ್ಥೆಯ ದಿನನಿತ್ಯದ ಮೇಲ್ವಿಚಾರಣೆ ಜವಾಬ್ದಾರಿಯನ್ನು ವಹಿಸಿದ್ದಾರೆ.

ಶ್ರೀ ಮನೋಹರ್ ಅವರು ಸ್ವತಃ SJJES ನ ಹಳೆಯ ವಿದ್ಯಾರ್ಥಿಯಾಗಿದ್ದು, 1997 ರಲ್ಲಿ ಸಂಸ್ಥೆಯ ಸದಸ್ಯರಾಗಿ ಸಂಸ್ಥೆಯನ್ನು ಸೇರಿದರು ಹಾಗೂ 2013 ರಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾದರು. ಕಾರ್ಯದರ್ಶಿಯಾಗಿ, ಅವರು ಸುಮಾರು 1,500 ವಿದ್ಯಾರ್ಥಿಗಳಿಗೆ ಎರಡು ಕ್ಯಾಂಪಸ್‌ಗಳಲ್ಲಿ 80 ಕ್ಕಿಂತ ಹೆಚ್ಚು ಸಿಬ್ಬಂದಿಗಳೊಂದಿಗೆ ಒಂಭತ್ತು ಶಾಲೆಗಳನ್ನು ನಿರ್ವಹಿಸುತ್ತಿದ್ದಾರೆ. 2023 ರಲ್ಲಿ SJJES ನ “60ರ-ಸಂಭ್ರಮ” ದ ಭವ್ಯ ಯಶಸ್ಸಿಗೆ ಇವರ ಕೊಡುಗೆ ಶ್ಲಾಘನೀಯ.

SJJES ನಲ್ಲಿ ಅವರ ಕೊಡುಗೆಯ ಜೊತೆಗೆ, ಶ್ರೀ ಮನೋಹರ್ ಅವರು ವೋಗ್ ಇನ್‌ಸ್ಟಿಟ್ಯೂಟ್‌ನ ಸಹಭಾಗಿತ್ವದಲ್ಲಿ ಫ್ಯಾಷನ್ ಮತ್ತು ವಿನ್ಯಾಸ ಪದವಿ ಕೋರ್ಸ್‌ಗಳನ್ನು ಕುವೆಂಪು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಪರಿಚಯಿಸಿರುತ್ತಾರೆ. ಅವರು ಸಹಕಾರಿ ಬ್ಯಾಂಕಿಂಗ್‌ನಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ ಮತ್ತು 1999 ರಲ್ಲಿ “ದಕ್ಷಿಣ ಭಾರತೀಯ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ “ನ್ನು ಆಯೋಜಿಸಿದ್ದರು.

ಜಂಟಿ ಕಾರ್ಯದರ್ಶಿಗಳು

ಶ್ರೀಮತಿ ಸೌಮ್ಯ ಬಸವರಾಜ

ಶ್ರೀಮತಿ ಸೌಮ್ಯ ಬಸವರಾಜ ಅವರು SJJESನ ಜಂಟಿ ಕಾರ್ಯದರ್ಶಿಯಾಗಿದ್ದು, ಸಂಸ್ಥೆಗೆ ಸಮರ್ಪಿಸಿಕೊಳ್ಳುವ ಕುಟುಂಬ ಪರಂಪರೆಯನ್ನು ಹೆಮ್ಮೆಯಿಂದ ಎತ್ತಿ ಹಿಡಿದಿದ್ದಾರೆ. ಅವರ ಅಜ್ಜ ಶ್ರೀ ಎಂ. ಕೆ. ಶಿವಪ್ಪನವರು ಸಂಸ್ಥಾಪಕ ಉಪಾಧ್ಯಕ್ಷರಾಗಿದ್ದರು ಹಾಗೂ ಅವರ ದೊಡ್ಡಪ್ಪ ಶ್ರೀ ಎಂ ಕೆ ರುದ್ರೇಶಿ ಅವರು ಹಲವು ವರ್ಷಗಳ ಕಾಲ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸೌಮ್ಯರವರ ತಂದೆ ಶ್ರೀ ಎಂ. ಕೆ. ಬಕ್ಕಪ್ಪನವರು ಜಂಟಿ ಕಾರ್ಯದರ್ಶಿಯಾಗಿ 28 ವರ್ಷಗಳ ಕಾಲ ಸಂಸ್ಥೆಗೆ ಸೇವೆ ಸಲ್ಲಿಸಿದ್ದು, ಈ ಅನುಭವವನ್ನು ಸಂಪೂರ್ಣವಾಗಿ ಮಗಳಿಗೆ ಧಾರೆ ಎರೆದಿದ್ದಾರೆ.

ಶ್ರೀಮತಿ ಗುರುಬಸಮ್ಮ ವಿ. ಚಿಗಟೇರಿ ಆಂಗ್ಲ ಮಾಧ್ಯಮ ಶಾಲೆಯ ಅಲುಮ್ನಿ (ಹಳೆಯ ವಿದ್ಯಾರ್ಥಿನಿ)ಯಾಗಿರುವ ಸೌಮ್ಯಾರವರು ತಮ್ಮ ಶೈಕ್ಷಣಿಕ ಪಯಣವನ್ನು ರೂಪಿಸಿದ ಶ್ರೇಯಸ್ಸು, ಸಂಸ್ಥೆಗೆ ಸಲ್ಲುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರು ಈಗ ಎಸ್‌ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಅಥಣಿ ಪಿಜಿ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೈಕ್ಷಣಿಕವಾಗಿ ಹಲವು ಪದವಿಗಳನ್ನು ಚಿನ್ನದ ಪದಕದೊಂದಿಗೆ ಎಂ.ಎ.ಎಫ್.(M A F) ಪ್ರಥಮ ಶ್ರೇಣಿ., ಎಂ.ಕಾಂ. (M com) ಫಲಿತಾಂಶದಲ್ಲಿ 5ನೇ ಸ್ಥಾನ,ಎಂ ಫಿಲ್, (M phil )ನ ಜೊತೆಗೆ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಪಿಜಿ ಡಿಪ್ಲೊಮಾ ಪಡೆದಿರುತ್ತಾರೆ.